ಇಷ್ಟು ದಿನಾ ದಿಗಂತ್ ಅಂದ್ರೆ ಸೋಮಾರಿತನಕ್ಕೆ ಬ್ರಾಂಡ್ ಅಂಬಾಸಿಡರ್ ಅನ್ನೋ ಭಾವನೆ ಮನಸ್ಸಲ್ಲಿ ಉಳಿದು ಬಿಟ್ಟಿತ್ತು. ದಿಗಂತ್ ಪೂರ್ಣ ಪ್ರಮಾಣದ ಹೀರೋ ಆಗಿ ನಟಿಸಿದಂಥ ಚಿತ್ರಗಳಲ್ಲಿ ನನಗೆ ಹತ್ತಿರವಾಗಿದ್ದು ಮನಸಾರೆ ಮತ್ತು ಪಂಚರಂಗಿ. ಈ ಎರಡೂ ಚಿತ್ರಗಳು ಭಟ್ಟರ ಬತ್ತಳಿಕೆಯಿಂದ ಬಂದಿರುವುದು ಮತ್ತೊಂದು ವಿಶೇಷವಾದರೆ ಇವುಗಳಲ್ಲಿ ನಾಯಕ ಪಕ್ಕಾ ಆಲಸಿ ಆಸಾಮಿ. ಭವಿಷ್ಯದ ಬಗ್ಗೆ ಯೋಚನೆ ಇಲ್ದೆ ಎಲ್ಲರನ್ನೂ ಬೈಯುತ್ತ ಓಡಾಡುವ ತತ್ವಜ್ಞಾನಿ. ಅದೆಷ್ಟು ಸಲ ನೋಡಿದ್ರು ಬೇಸರವಾಗದ, ನಾಯಕನ ಸೋಮಾರಿತನವನ್ನು ವಿಜೃಂಭಿಸುವ ಈ ಚಿತ್ರಗಳು ನನ್ನ All time Favorite. ಅವುಗಳಲ್ಲಿರುವ ಭಟ್ಟರ ಡೈಲಾಗ್, ದಿಗಿ ಬಾಯಲ್ಲಿ ಕೇಳೋದೆ ನನ್ನಂಥಾ ಆಲಸಿ ಕಂ ತತ್ವಜ್ಞಾನಿಗಳಿಗೆ ಒಂಥರ ಪರಮಸುಖ. ಆ ಸಿನಿಮಾಗಳಲ್ಲಿ ಸ್ನಾನಕ್ಕೂ ಬೇಜಾರ ಮಾಡಿಕೊಳ್ಳುವಂಥ ನಾಯಕ, 'ಕಥೆಯೊಂದು ಶುರುವಾಗಿದೆ' ಚಿತ್ರದಲ್ಲಿ ಬೆಳಗ್ಗೆ ಎದ್ದು ಜಾಗಿಂಗ್ ಮಾಡ್ತಾನೆ ಅಂದ್ರೆ ನಿಜಕ್ಕೂ ಒಂದು ಕ್ಷಣ ಆಶ್ಚರ್ಯ. ಸಿನಿಮಾದ ಶುರುವಾತಲ್ಲೇ ಈ ಪರಿ ಶಾಕ್ ಕೊಟ್ಟ ಪುಣ್ಯಾತ್ಮ, ಮುಂದೇನ ಮಾಡಿದಾನೆ ಅನ್ನೋ ಕುತೂಹಲ ಶುರುವಾಯ್ತು. ತನ್ನ ಕನಸನ್ನ ಬೆನ್ನಟ್ಟಿದ ಜವಾಬ್ದಾರಿಯುತ ತರುಣ್ ಪಾತ್ರಕ್ಕೆ ದಿಗಂತ್ ನ್ಯಾಯ ಒದಗಿಸಿರುವ ಪರಿ ನಿಜಕ್ಕೂ ಶ್ಲಾಘನೀಯ. ದಿಗಂತ್ ಆ ಪಾತ್ರದಲ್ಲಿ ಜೀವಿಸಿದ್ದಾನೆ ಕೂಡ. ದಿಗಂತ್ ಎಂಬ ಮುದ್ದಾದ ನಟನಿಂದ ಈ ರೀತಿ ನಟನೆಯನ್ನ ಹೊರತೆಗೆದ ನಿರ್ದೇಶಕ ಸೆನ್ನಾ ಹೆಗ್ಡೆ ಅವರ ನೈಪುಣ್ಯತೆಗೆ Hats off. ಉಳಿದವರೂ ಸಹ ತಂತಮ್ಮ ಪಾತ್ರಗಳಿಗೆ ಅಚ್ಚುಕಟ್ಟಾಗಿ ನ್ಯಾಯ ಒದಗಿಸಿದ್ದಾರೆ. ಕ್ಯಾಮೆರಾ ಕೈಚಳಕ ಮತ್ತು ಸಂಗೀತ Excellent. ಈ ರೀತಿ ಹೊಸತನದಿಂದ ಕೂಡಿದ ಚಿತ್ರಗಳು ಕನ್ನಡದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಬರುವಂತಾಗ್ಲಿ. ದಿಗಂತ್ ಜಾಗಿಂಗ್ ಮಾಡೋದನ್ನ ನೋಡಿ ನಾನೂ ಬೆಳಗ್ಗೆ ಎದ್ದು ಜಾಗಿಂಗ್ ಹೋಗಬೇಕು ಅನಸ್ತಿದೆ. 'ಜೀವನದಲ್ಲಿ ಮುಂದೆ ಬರಬೇಕು, ಆದ್ರೆ ಇಷ್ಟಲ್ಲ' ಎನ್ನುತ್ತ ಡುಮ್ಮು ಹೊಟ್ಟೆಯನ್ನ ತೋರಿಸುತ್ತ ದಿಗಿ ಹೇಳಿದ ಡೈಲಾಗ್ ಪದೇ ಪದೇ ಕಾಡುತ್ತಿದೆ. ಜಾಗಿಂಗ್ ಮಾಡಲೆಂದೇ ಎರಡು ತಿಂಗಳ ಹಿಂದೆ ಖರೀದಿಸಿರುವ ಹೊಸ ಬೂಟುಗಳನ್ನ ಕಾಲಿಗೆ ಮೆಟ್ಟಿಕೊಳ್ಳಬೇಕೆಂಬ ಹಂಬಲ ಶುರುವಾಗಿದೆ.