ಕಾಲ, ದೇಶ, ಮನುಷ್ಯ , ಮತ , ಯುದ್ಧ , ಪ್ರೀತಿ, ಧರ್ಮ, ವಾಣಿಜ್ಯ, ವ್ಯಾಪಾರ, ಸಮುದ್ರಯಾನ, ರಾಜ್ಯಪಾಲನೆ, ನೇಕಾರಿಕೆ, ವೇಶ್ಯಾವಾಟಿಕೆ, .... ಹೀಗೆ; ಈ ಕಥನದ ವಿಸ್ತಾರ, ವೈವಿಧ್ಯ ಹಾಗೂ ಅದರೊಳಗಣ ಸೂಕ್ಷ್ಮ ಬೆಕ್ಕಸಗೊಳಿಸುವಂತಿದೆ. ಇತಿಹಾಸಕ್ಕೊಂದು ಜೀವಂತಿಕೆ ತಂದುಕೊಟ್ಟ ಕಾದಂಬರಿ ಇದು. ೧೪-೧೫ನೇ ಶತಮಾನದಲ್ಲಿ ಭಾರತೀಯ ಮಸಾಲಾ ಪದಾರ್ಥ ಹಾಗೂ ಪರ್ಷಿಯಾದ ಕುದುರೆಗಳಿಗಿದ್ದ ವಿಶೇಷ ಪ್ರಾಮುಖ್ಯತೆ ಓದುಗರನ್ನು ಸೆಳೆಯುವಂತಿದೆ.
ಮನುಕುಲದ ಚಲನಶೀಲತೆಯ ತಳಪಾಯವಾಗಿರುವ ವಲಸೆ ಮತ್ತು ಸಂಕರದ ಸಂಕೀರ್ಣತೆಯ ಸುತ್ತ ಬೆಳೆದಿರುವ ಈ ಕಥಾನಕವು ಖಂಡಾಂತರಗಳಲ್ಲಿ ಜರಗುತ್ತದೆ. ರಾಜಕೀಯ ಮತ್ತು ಪ್ರಭುತ್ವದ ಕಾಣದ ಕೈಗಳು ಜನಸಾಮಾನ್ಯರ ಬದುಕನ್ನು ಕಲಕುವುದನ್ನು ಮನಮುಟ್ಟುವಂತೆ ಇಲ್ಲಿ ರೂಪಿಸಲಾಗಿದೆ. ಶತಮಾನಗಳ ಹಿಂದಿನ ವಿಶಿಷ್ಟ ಜೀವನಶೈಲಿಯನ್ನು ಬಿರುಕಿಲ್ಲದೇ, ಇಂದಿಗೂ ಪ್ರಸ್ತುತವಾಗಿಸಿದ ಅಪರೂಪದ ಕಲೆಗಾರಿಕೆಗಾಗಿ 'ವಸುಧೇಂದ್ರ' ಅಭಿನಂದನಾರ್ಹರು. ಓದಿ ಮುಗಿಸಿದ ನಂತರವೂ ಈ ಕಾದಂಬರಿ ಓದುಗರ ಗುಂಗಿನಲ್ಲಿರುವುದು ಹಾಗೆ ಕಥನದಲ್ಲಿರುವ ಬಂಗಾರದ ಮೀನುಗಳು ಮತ್ತೆ ಮತ್ತೆ ಮನಕ್ಕೆ ಮುತ್ತಿಕ್ಕುವುದು ಖಚಿತ.