ಭೂಗತ ಜಗತ್ತಿನ ಹಿನ್ನೆಲೆಯಲ್ಲಿ ಸಾಗುವ ಕಥೆ: ಬೀದಿ ಬದಿಯಲ್ಲಿ ಶವವಾಗಿ ಬೀಳಬಹುದಾಗಿದ್ದ ಗೊತ್ತು ಗುರಿಯಿಲ್ಲದ ಅಮಾಯಕ ಹುಡುಗ - ಶಿವ, ಸಮಾಜದ ನಿರ್ಲಕ್ಷ್ಯ ಕ್ಕೊಳಗಾಗಿ, ನೋವನ್ನ ಅನುಭವಿಸಿ, ಕೊನೆಗೂ ರೌದ್ರ ನಾಗಿ ಬದಲಾಗುವ ಸನ್ನಿವೇಶ ! ತನ್ನಂತೆ ಅನಾಥನಾಗಿರುವ , ಆದರೆ ತನಗೆ ಯಾವುದೇ ಸಾಮ್ಯತೆ ಇಲ್ಲದಿರುವ ಇನ್ನೋರ್ವ ಹುಡುಗ- ಹರಿ ಜತೆ, ಗೆಳೆತನವ ಬೆಳೆಸಿ, ಮುಂದೊಂದು ದಿನ ಇಡೀ ಮಂಗಳೂರಿನ ಭೂಗತ ಜಗತ್ತನ್ನು ನಿಯಂತ್ರಿಸುವ ಮಟ್ಟಕ್ಕೆ ಬೆಳೆಯುತ್ತಾನೆ. ಆ ಕ್ರೌರ್ಯದ ಹಾದಿಯಲ್ಲಿಯೇ, ಈರ್ವರೂ, ತಮ್ಮ ಅವನತಿಯನ್ನ ಕಾಣುತ್ತಾರೆ.
"ಮಾತು' -'ಮೌನ'ವಾಗಿ, 'ಮೌನ' ಚಿತ್ರದ ಜೀವಾಳವಾಗುತ್ತದೆ!!
ಚಿತ್ರದಲ್ಲಿ ಆಡುಭಾಷೆಯ ಪದಗಳು ಆಕ್ಷೇಪಾರ್ಹವಾಗಿ ಕಾಣದೆ, ಭೂಗತ ಜಗತ್ತಿನ ಕಥೆಗೆ ಶೋಭೆ ತರುವಂತಿದೆ. ರಾಜ್ ಶೆಟ್ಟಿಯ ಅಭಿನಯ, ಆತ ಮಾಡುವ ಕೊಲೆಗಳು, ಅದನ್ನ ಹಸಿಹಸಿಯಾಗಿ ತೋರಿಸಿದ ರೀತಿ, ಭಯಾನಕ ಅನ್ನಿಸುತ್ತದೆ; ಹಾಗೂ ನೈಜತೆಗೆ ಪೂರಕವಾಗಿದೆ. ಭೂಗತ ಜಗತ್ತಲ್ಲಿಯೂ ತನ್ನ ಸ್ನೇಹಕ್ಕೆ ಪ್ರಾಣವನ್ನೇ ಕೊಡುವ ಶಿವ, ಸ್ನೇಹದಲ್ಲಿ ಸ್ವಾರ್ಥ ಸಾಧಿಸುವ ಹರಿ, ನಮ್ಮೆಲ್ಲರ ಎದುರು ದೈನಂದಿನ ಜೀವನದಲ್ಲಿ ನಡೆವ ಘಟನೆಗಳ ಪ್ರತಿರೂಪವಾಗಿ ನಿಲ್ಲುತ್ತಾರೆ.
ಆದರೆ....
ಕಥೆಯ ದ್ವಿತೀಯಾರ್ಧ ನಿಧಾನಗತಿಯಲ್ಲಿ ಸಾಗುತ್ತಾ, ಪ್ರೇಕ್ಷಕರ ತಾಳ್ಮೆಯನ್ನು ಪರೀಕ್ಷಿಸುತ್ತದೆ. ಮಂಗಳಾದೇವಿ ಮತ್ತು ಕದ್ರಿಯ ಪರಿಸರವನ್ನು ಮಾತ್ರ ಬಳಸಿ ಚಿತ್ರದ ದೃಶ್ಯವೈಭವವನ್ನೂ ಸೀಮಿತ ಗೊಳಿಸಿದ್ದಾರೆ.
ಕೊನೆಗೂ ಹೇಳಬಹುದಾದದ್ದನ್ನು ಹೇಳಲಾಗದೆ, ಕಥೆ ಹಠಾತ್ ಆಗಿ ಅಂತ್ಯವನ್ನು ಕಾಣುತ್ತದೆ - ಹರಿ ಶಿವರ ಸಾವಿನಂತೆ!
ಭೂಗತ ಜಗತ್ತಿನ ...ವಿಕ್ಷಿಪ್ತ ಮನಸ್ಥಿತಿಯ ವ್ಯಕ್ತಿಯ, ವಿಲಕ್ಷಣ ಚಿತ್ರ ; ಅಲ್ಲಿ ನಡೆಯುವ ಸನ್ನಿವೇಶ ಗಳೆಲ್ಲವೂ ವಿಚಿತ್ರ ! ......ಆದರೆ, ಅದರಲ್ಲಿಯೇ ಇದೆ ...ಈ ಚಿತ್ರಕಥೆಯ ಸಾರ್ಥಕತೆ ಕೂಡ !